ಅನಂತಕವಿ
  	
(1780).ಜೈನಕವಿ, ಸಾಂಗತ್ಯದಲ್ಲಿ ಈತ ಬರೆದಿರುವ ಗೊಮ್ಮಟೇಶ್ವರ ಚರಿತ್ರೆಯಲ್ಲಿ ಶ್ರವಣಬೆಳಗೊಳಕ್ಕೆ ಸಂಬಂಧಿಸಿದಂತೆ ಅನೇಕ ಐತಿಹಾಸಿಕ ಅಂಶಗಳನ್ನು ವಿವರಿಸಿದ್ದಾನೆ. 1673ರಲ್ಲಿ ಕಟ್ಟಿದ ಚಿನ್ನಣ್ಣನ ಬಸದಿ, 1677ರಲ್ಲಿ ಚಿಕ್ಕದೇವರಾಜನ ಮಂತ್ರಿ ವಿಶಾಲಾಕ್ಷಪಂಡಿತ ಗೊಮ್ಮಟೇಶ್ವರನಿಗೆ ಮಾಡಿಸಿದ ಮಸ್ತಕಾಭಿಷೇಕ, ಬೆಳಗೊಳದ ಕಲ್ಯಾಣಿ ನಿರ್ಮಾಣ, ಚಂದ್ರಗಿರಿಯ ಪ್ರಾಕಾರ, ಮಾನಸ್ತಂಭ- ಇವುಗಳ ಇತಿಹಾಸ ಹೇಳಿರುವುದಲ್ಲದೆ ಅನೇಕ ಜೈನಯತಿಗಳಿಗೂ ಶ್ರವಣಬೆಳಗೊಳಕ್ಕೂ ಇರುವ ಸಂಬಂಧವನ್ನು ಗುರುತಿಸಿದ್ದಾನೆ. ಚಾವುಂಡರಾಯನಿಗಿಂತ ಪೂರ್ವದಲ್ಲಿಯೇ ಗೊಮ್ಮಟಮೂರ್ತಿಯಿದ್ದು ಅದನ್ನು ಚಾವುಂಡರಾಯ ಪ್ರತಿಷ್ಠಿಸಿದನೆಂದು ಹೇಳಿ ಸಂಶೋಧಕರ ದೃಷ್ಟಿ ಅತ್ತ ಹರಿವಂತೆ ಮಾಡಿದ್ದಾನೆ.
	
ಗೊಮ್ಮಟ ಚರಿತ್ರೆ ಅಸಮಗ್ರವಾಗಿದೆ. ಶೈಲಿ ಸರಳ ಸುಂದರವಾಗಿದೆ. ಅನೇಕ ಐತಿಹಾಸಿಕ ಅಂಶಗಳನ್ನು ಗ್ರಂಥದಲ್ಲಿ ಹೇಳಿರುವುದರಿಂದ ಸಂಶೋಧಕರಿಗೆ ಹೆಚ್ಚಿನ ಉಪಕಾರವಾಗಿದೆ.						
(ಬಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ